ಕಾಪ್ಟಿಕ್ ಲಿಪಿ

ಪ್ರಾಚೀನ ಈಜಿಪ್ಟಿನ ಹ್ಯಾಮಿಟಿಕ್ ಭಾಷಾ ಸಂತತಿಗೆ ಸೇರಿದ ಮತ್ತು ಗ್ರೀಕ್ ಭಾಷೆಯ ಐಗುಪ್ತೊಯ್ ಎಂಬ ಪದ ಅರಬ್ಬೀ ಭಾಷೆಯಲ್ಲಿ ಕಾಪ್ಟ್ ಅಥವಾ ಕುಬ್ತ್ ಎಂದಾಗಿ, ಅದರಿಂದ ಕಾಪ್ಟಿಕ್ ಎಂಬ ಹೆಸರು ಬಂದಿದೆ. ಆಫ್ರಿಕಾದ ಮೂಲ ನಿವಾಸಿಗಳನ್ನು ಈಗ ಕಾಪ್ಟಿಕ್ ಜನರೆಂದು ಕರೆಯುತ್ತಾರೆ. ಕಾಪ್ಟಿಕ್ ಲಿಪಿಯ ಶಾಸನಗಳು 2-3ನೆಯ ಶತಮಾನಗಳಿಂದ ದೊರಕುತ್ತವೆ. ಈ ಲಿಪಿಯ ಶಾಸನ ಮೂವತ್ತೆರಡು ಅಕ್ಷರಗಳಿವೆ. ಅವುಗಳಲ್ಲಿ ಇಪ್ಪತ್ತೈದು ಗ್ರೀಕ್ ಲಿಪಿಯಿಂದಲೂ ಮಿಕ್ಕ ಏಳು ಅಕ್ಷರಗಳು ಈಜಿಪ್ಟಿನ ಡೆಮೊಟಿಕ್ ಲಿಪಿಯಿಂದಲೂ ಬಂದುವು. ಕಾಪ್ಟಿಕ್ ಲಿಪಿಯ ಬೆಳವಣಿಗೆ ಗ್ರೀಕ್ ಲಿಪಿಯನ್ನೇ ಅನುಸರಿಸಿತು. ಕಾಪ್ಟಿಕ್ ಭಾಷೆ ಮತ್ತು ಲಿಪಿ ವಿಶೇಷವಾಗಿ ಆಫ್ರಿಕದ ಹಳ್ಳಿಗಳಲ್ಲಿ ಬಳಕೆಯಲ್ಲಿದ್ದುದರಿಂದ, ಅರಬರ ದಾಳಿಗಳಿಂದ ಅದು ಪೂರ್ಣವಾಗಿ ನಶಿಸಿಹೋಗಲಿಲ್ಲ. ಹೀಗಾಗಿ ಅದು ಹದಿನೇಳನೆಯ ಶತಮಾನದವರೆಗೆ ಬಳಕೆಯಲ್ಲಿತ್ತು.      

 (ಎ.ವಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ